ಭೋಯಿ
	1542-59. ಒರಿಸ್ಸ ರಾಜ್ಯವನ್ನು 18 ವರ್ಷ ಮಾತ್ರ ಆಳಿದ ಒಂದು ರಾಜಮನೆತನ. ಇದನ್ನು ಭೋಮ್ ಸಂತತಿ ಎಂದೂ ಕರೆಯುವುದುಂಟು. ಒರಿಸ್ಸದ ಸೂರ್ಯವಂಶದ ಅರಸ ಪ್ರತಾಪರುದ್ರ ಗಜಪತಿಯ (1497-1540) ಮಂತ್ರಿಯಾಗಿದ್ದ ಗೋವಿಂದ ವಿದ್ಯಾಧರ ಈ ಮನೆತನದ ಸ್ಥಾಪಕ.

	1509ರಲ್ಲಿ ಬಂಗಾಳದ ಸುಲ್ತಾನ ಒರಿಸ್ಸದ ಮೇಲೆ ದಾಳಿನಡೆಸಿದಾಗ ಪ್ರತಾಪರುದ್ರ ಹೋರಾಟ ನಡೆಸಿದ. ಆದರೆ ಮಂತ್ರಿ ಗೋವಿಂದ ವಿದ್ಯಾಧರನ ಮೋಸದಿಂದಾಗಿ ಆತ ಸುಲ್ತಾನನೊಡನೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಪ್ರತಾಪರುದ್ರನ ಮರಣಾನಂತರ ಆತನ ಅಪ್ರಾಪ್ತಮಯಸ್ಸಿನ ಮಕ್ಕಳಾದ ಕಾಲುವದೇವ ಹಾಗೂ ಕಬರುವದೇವರನ್ನು ಕೊಲ್ಲಿಸಿ ಗೋವಿಂದ ಅಧಿಕಾರಕ್ಕೆ ಬಂದ.

	ಗೋವಿಂದನ ಆಳ್ವಿಕೆಯ ಕಾಲದಲ್ಲಿ ಸಿಂಹಾಚಲ ಒರಿಸ್ಸದ ದಕ್ಷಿಣ ಮೇರೆಯಾಗಿತ್ತು. ಒರಿಯ ಭಾಷೆಯ ಕೆಲವು ಶಾಸನಗಳು ಇಲ್ಲಿ ದೊರೆತಿದ್ದು ಅವುಗಳಲ್ಲಿ ಅರಸನನ್ನು "ವೀರಶ್ರೀ ಗಜಪತಿ ಗೌಡೇಶ್ವರ ನವಕೋಟಿಕರ್ಣಾಟಕ ಕಲಾವರ್ಗೇಶ್ವರ ಶ್ರೀಸುವರ್ಣಕೇಶರಿ ಗೋವಿಂದದೇವ ಮಹಾರಾಜ" ಎಂದು ವರ್ಣಿಸಿದೆ. 1549ರಲ್ಲಿ ಗೋವಿಂದನ ಮಗ ಚಕ್ರಪ್ರತಾಪ ಪಟ್ಟಕ್ಕೆ ಬಂದ. ಈತ ಕ್ರೂರಿ. ಎಂಟುವರ್ಷಗಳ ಕಾಲ ರಾಜ್ಯವಾಳಿದ ಈತನನ್ನು ಈತನ ಮಗ ನರಸಿಂಹಾಜೆನಾ ಕೊಲೆಗೈದು 1557ರಲ್ಲಿ ಪಟ್ಟಕ್ಕೆ ಬಂದ. ಆದರೆ ನರಸಿಂಹಜೆನಾ ಹೆಚ್ಚುಕಾಲ ರಾಜ್ಯವಾಳಲಿಲ್ಲ. ಚಾಲುಕ್ಯ ಅರಸ ಮುಕುಂದ ಹರಿಚಂದನ ಈತನನ್ನು ಕೊಂದ. ಚಕ್ರಪ್ರತಾಪನ ಕಿರಿಯ ಮಗ ರಘುರಾಮಜೆನಾ ರಾಜ್ಯ ಪಡೆಯಲು ನಡೆಸಿದ ಹೋರಾಟ ಫಲಪ್ರದವಾಗಲಿಲ್ಲ. ದಾನೈವಿದ್ಯಾಧರ ಮತ್ತು ರಘುಭಂಜಚೊತ್ರಾಯ್ ಸರೆಯಾಳುಗಳಾದರು; ಮೊದಲನೆಯವನು ಸೆರೆಮನೆಯಲ್ಲಿಯೇ ಸಾವನ್ನಪ್ಪಿದ. ಇನ್ನೊಬ್ಬ ಮುಕುಂದನಿಂದ ಹತನಾದ. 1559ರಲ್ಲಿ ಮುಕುಂದ ದೇವ ಸಿಂಹಾಸನವನ್ನೇರಿದಾಗ ಭೋಯಿ ಮನೆತನದ ಆಳ್ವಿಕೆ ಕೊನೆಗೊಂಡಿತು.								             		  				
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ